Wednesday 16 January, 2013

'ಟೋಪಿವಾಲ': ಉಪ್ಪಿ ಮೈಂಡ್ ಗೇಮ್ ಶುರು


'ಆರಕ್ಷಕ' ಚಿತ್ರ ಚೆನ್ನಾಗಿಯೇ ಇತ್ತು, ಆದರೆ ಪ್ರೇಕ್ಷಕರಿಗೆ ಅರ್ಥವಾಗಲಿಲ್ಲ. ತುಂಬಾ ಕಠಿಣ ಎಂಬ ಕಾರಣಕ್ಕೆ ಸೋತು ಹೋಯಿತು. ಅಂತಹುದ್ದೇ ಇನ್ನೊಂದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಬಿಡುಗಡೆಗೆ ಮೊದಲೇ 'ತಲೆ ಇಲ್ಲದವರಿಗಲ್ಲ' ಎಂಬ ನಿರೀಕ್ಷಣಾ ಜಾಮೀನು ಪಡೆಯಲಾಗಿದೆ!

'ಎ' ಚಿತ್ರದ ಮೂಲಕ 'ಬುದ್ಧಿವಂತರಿಗೆ ಮಾತ್ರ' ಎಂಬ ಟ್ಯಾಗ್‌ಲೈನ್ ಬರೆಸಿದ್ದ ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿರುವ 'ಟೋಪಿವಾಲ' ಚಿತ್ರವನ್ನು ಸಂಭಾಷಣೆ ಬರೆದು ನಿರ್ದೇಶಿಸಿರುವುದು ರೇಡಿಯೋ ಜಾಕಿ ಶ್ರೀನಿವಾಸ್. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿರುವುದು ಉಪೇಂದ್ರ. ಪ್ರೇಕ್ಷಕರಲ್ಲಿ ಒಂದಿಷ್ಟು ಕುತೂಹಲ ಇರಲಿ ಎಂಬ ಕಾರಣಕ್ಕೆ 'ತಲೆ ಇಲ್ಲದವರಿಗಲ್ಲ' ಎಂದು ಪೋಸ್ಟರುಗಳಲ್ಲಿ ಬರೆಯಲಾಗಿದೆ.

ಆದರೆ ಅಷ್ಟಕ್ಕೇ ಉಪ್ಪಿ ಪ್ರವರ ಮುಗಿಯುತ್ತಿಲ್ಲ. ಮೈಂಡ್ ಗೇಮ್‌ಗೆ ಸಿದ್ಧರಾಗಿ ಎಂದು ಪೋಸ್ಟರುಗಳಲ್ಲಿ ಬರೆಯುವ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸುತ್ತಿದೆ ಚಿತ್ರತಂಡ. ಅದಕ್ಕೆ ಪೂರಕವೆಂಬಂತೆ, ಒಂದು ಲೆಕ್ಕಚಾರದ ಪ್ರಶ್ನೆಯನ್ನೂ ಕೊಡಲಾಗಿದೆ. ಇದನ್ನು ಮಾಡಿ ಮುಗಿಸಿ, ನಿಜವಾದ ಟೋಪಿವಾಲ ಯಾರು ಎಂಬುದನ್ನು ಪತ್ತೆ ಹಚ್ಚಿ ಎಂದು ಪಂಥಾಹ್ವಾನ ನೀಡಲಾಗಿದೆ.

ಆ ಲೆಕ್ಕ ಹೀಗಿದೆ:

Among 26!
2 + 1 + 19 + 1 + 11 = Topiwala

ಈ ಸಮಸ್ಯೆಯನ್ನು ಬಗೆಹರಿಸಿದರೆ ನಿಜವಾದ ಟೋಪಿವಾಲ ಯಾರು ಅನ್ನೋದು ಗೊತ್ತಾಗುತ್ತದೆ. ಆದರೆ ಹೇಗೆ? ಅಷ್ಟು ಸುಲಭದಲ್ಲಿ ಇದನ್ನು ಬಗೆಹರಿಸಲಾಗದು. ಆದರೂ ಒಂದು ಪ್ರಯತ್ನ ನಡೆದಿದೆ. ಅದರ ಪ್ರಕಾರ, ಇಲ್ಲಿ 26 ಎನ್ನುವುದು ಇಂಗ್ಲೀಷ್ ಅಕ್ಷರಮಾಲೆ ಲೆಕ್ಕ. ಇಲ್ಲಿ ಕೊಡಲಾಗಿರುವ 2, 1, 19, 1, 11 ಅಂಕಿಗಳಿಗೆ ಅಕ್ಷರಗಳನ್ನೇ ಕ್ರಮವಾಗಿ ಜೋಡಿಸಬೇಕು. ಅಂದರೆ ಅದು BASAK ಎಂದಾಗುತ್ತದೆ. ಅದನ್ನು ಉಲ್ಟಾ ಮಾಡಿದರೆ KASAB ಎಂದಾಗುತ್ತದೆ.

ಅಂದರೆ ಕಸಬ್ ಕಥೆಯನ್ನೇ ಟೋಪಿವಾಲದಲ್ಲಿ ಸಿನಿಮಾ ಮಾಡಲಾಗಿದೆಯೇ? ಗೊತ್ತಿಲ್ಲ. ಅಷ್ಟಕ್ಕೂ ಈ ಉತ್ತರವೇ ಸರಿ ಅನ್ನೋದು ಖಚಿತವಿಲ್ಲ. ಬೇರೇನಾದರೂ ಉತ್ತರ ಇದೆಯೇ ಎಂದು ನೀವೂ ಟ್ರೈ ಮಾಡಬಹುದು.

'ಟೋಪಿವಾಲ' ಚಿತ್ರದಲ್ಲಿ ಉಪ್ಪಿಗೆ ಭಾವನಾ ಮೆನನ್ ನಾಯಕಿ. ಫೆಬ್ರವರಿ ಮೊದಲ ಅಥವಾ ಎರಡನೇ ವಾರದಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆಗಳಿವೆ.



Thursday 10 January, 2013

ಉಪೇಂದ್ರ: ನನ್ನ ನಿರ್ದೇಶನದ್ದು ಪಕ್ಕಾ ಉಪೇಂದ್ರ ಚಿತ್ರ!


ರಿಯಲ್ ಸ್ಟಾರ್ ಉಪೇಂದ್ರ 'ಸೂಪರ್' ಯಶಸ್ಸಿನ ನಂತರ ಇನ್ನೊಂದು ಚಿತ್ರದ ನಿರ್ದೇಶನಕ್ಕೆ ಮುಂದಾಗುತ್ತಿದ್ದಾರೆ ಅನ್ನೋದು ತುಂಬಾ ಹಳೆ ಸುದ್ದಿ. ಆದರೆ ಚಿತ್ರ ಮಾತ್ರ ಇನ್ನೂ ಸೆಟ್ಟೇರುತ್ತಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನೂ ನೀಡುತ್ತಿಲ್ಲ. ಪೋಸ್ಟರ್ ಬಿಡುಗಡೆ ಮಾಡಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟು ಮಜಾ ನೋಡುತ್ತಿದ್ದಾರೆ.

2012ರಲ್ಲಿ ಆರಕ್ಷಕ, ಕಠಾರಿ ವೀರ ಸುರಸುಂದರಾಂಗಿ, ಗಾಡ್ ಫಾದರ್, ಕಲ್ಪನಾ ಚಿತ್ರಗಳಲ್ಲಿ ಯಶಸ್ಸು ಕಂಡ ಉಪೇಂದ್ರ ಈ ವರ್ಷಾರಂಭವನ್ನು 'ಟೋಪಿವಾಲ' ಚಿತ್ರದ ಮೂಲಕ ಮಾಡುತ್ತಿದ್ದಾರೆ. ಇದಕ್ಕೆ ಸ್ವತಃ ಉಪ್ಪಿಯೇ ಕಥೆ, ಚಿತ್ರಕಥೆ ಬರೆದಿರುವುದು ವಿಶೇಷ. ಸಂಭಾಷಣೆ ಬರೆದು ನಿರ್ದೇಶಿಸಿರುವುದು ರೇಡಿಯೋ ಜಾಕಿ ಶ್ರೀನಿವಾಸ್. ಭಾವನಾ ಮತ್ತು ಮೈತ್ರೇಯಿ ನಾಯಕಿಯರು. ಶೀಘ್ರದಲ್ಲೇ ಚಿತ್ರ ಬಿಡುಗಡೆಯಾಗಲಿದೆ.

ಈಗ ವಿಷಯಕ್ಕೆ ಬರೋಣ. ಉಪೇಂದ್ರ ನಿರ್ದೇಶನದ 'ಉಪೇಂದ್ರ 2' ಎಂದು ಹೇಳಲಾಗುತ್ತಿರುವ ಚಿತ್ರ ಯಾವ ಹಂತದಲ್ಲಿದೆ? ಹೀಗಂತ ಪ್ರಶ್ನಿಸಿದರೆ, ಉಪ್ಪಿ ನೀಡುವ ಮಾಮೂಲಿ ಉತ್ತರ ಕಥೆ ರೆಡಿಯಾಗುತ್ತಿದೆ.

ನನ್ನ ನಿರ್ದೇಶನದ ಹೊಸ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಇದೊಂದು ಸೈಕಾಲಾಜಿಕಲ್ ಥ್ರಿಲ್ಲರ್ ಮತ್ತು ಉಪ್ಪಿ ಶೈಲಿಯ ಚಿತ್ರದಲ್ಲಿ ಏನಿರಬೇಕೋ ಅದೆಲ್ಲವೂ ಇರುತ್ತದೆ. ನಾನು ಮತ್ತು ನನ್ನ ತಂಡ ಚಿತ್ರಕ್ಕೆ ಕಥೆ ಮತ್ತು ಇತರ ಕೆಲಸಗಳ ಸಿದ್ಧತೆಯಲ್ಲಿದೆ. ಇತ್ತೀಚೆಗಷ್ಟೇ ವಯನಾಡ್‌ಗೆ ಹೋಗಿದ್ದೆವು. ಆರಾಮವಾಗಿ ಯೋಚಿಸುತ್ತಾ ಕಥೆ ಬರೆಯಲು ಅದು ಸೂಕ್ತ ಸ್ಥಳ ಎಂದು ಉಪ್ಪಿ ತಿಳಿಸಿದ್ದಾರೆ.

ಕೆಲ ಸಮಯದ ಹಿಂದೆ ಉಪೇಂದ್ರ ತನ್ನ ಹೊಸ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದರು. ಎಂದಿನಂತೆ ಆ ಪೋಸ್ಟರ್‌ನಲ್ಲಿ ಚಿತ್ರದ ಹೆಸರಿರಲಿಲ್ಲ. ಅಭಿಮಾನಿಗಳ ಪ್ರಕಾರ, ಇದು ಉಪೇಂದ್ರ ಚಿತ್ರದ ಮುಂದುವರಿದ ಭಾಗ. ಅದೇ ಸರಿಯೆಂಬಂತೆ ಇದುವರೆಗೆ ಉಪ್ಪಿ ಅಲ್ಲಗಳೆದಿಲ್ಲ. ಈ ವರ್ಷದ ಮಧ್ಯಭಾಗದಲ್ಲಿ ಚಿತ್ರ ಸೆಟ್ಟೇರಬಹುದು ಎಂದು ಹೇಳಲಾಗುತ್ತಿದೆ.

ಲೇಟಾದರೂ ಪರವಾಗಿಲ್ಲ, ಉಪ್ಪಿ ತನ್ನ ಅಭಿಮಾನಿಗಳಿಗೆ ನಿರಾಸೆ ಮಾಡುವುದಿಲ್ಲ. ಗಿಮಿಕ್ ಮಾಡಿದರೂ ಪ್ರೇಮ್‌ರಂತೆ ನಿರಾಸೆ ಮಾಡುವುದಿಲ್ಲ ಎಂಬ ಭರವಸೆ ಅವರ ಅಭಿಮಾನಿಗಳಲ್ಲಿದೆ. ಅದನ್ನು ಉಳಿಸಿಕೊಂಡರೆ ಸಾಕು, ಏನಂತೀರಾ?

Thursday 20 December, 2012

'ತಲೆ ಇಲ್ಲದವರಿಗೆ' ಮಾತ್ರ ಉಪೇಂದ್ರ ರಿಯಲ್ ಟೋಪಿ!


ಟೋಪಿ ಹಾಕಿಸಿಕೊಳ್ಳುವವರು ಯಾರು? ಸಾಮಾನ್ಯವಾಗಿ ತಲೆ ಇಲ್ಲದವರು. ತಲೆ ಇದ್ದವರಿಗೆ ಅಷ್ಟು ಸುಲಭದಲ್ಲಿ ಟೋಪಿ ಹಾಕುವುದು ಸಾಧ್ಯವಿಲ್ಲ. ರಾಜಕಾರಣಿಗಳು ತಾವು ಟೋಪಿ ಹಾಕಿಕೊಂಡು ಇತರರಿಗೆ ಟೋಪಿ ಹಾಕುತ್ತಾರೆ. ಟೋಪಿ ಎಂದರೆ ಮೋಸ ಮಾಡುವುದು. ಹೀಗೆ ಮೋಸ ಮಾಡುವ ಕಲೆಯನ್ನೇ ಸಿನಿಮಾ ಮಾಡಿದರೆ ಹೇಗೆ? ಹೀಗೆ ಲೆಕ್ಕಾಚಾರ ಹಾಕಿ ರಿಯಲ್ ಸ್ಟಾರ್ ಉಪೇಂದ್ರ ಕಥೆ, ಚಿತ್ರಕಥೆ ಬರೆದಿರುವ ಚಿತ್ರವೇ 'ಟೋಪಿವಾಲ'!

ಉಪ್ಪಿ ಬರೆದ ಕಥೆ, ಚಿತ್ರಕಥೆಯೆಂದ ಮೇಲೆ ಸಿನಿಮಾ ಕೆಟ್ಟದಾಗಿರುವುದಿಲ್ಲ ಅನ್ನೋದು ಗ್ಯಾರಂಟಿ. ಅದರಲ್ಲೂ 'ತಲೆ ಇಲ್ಲದವರಿಗೆ' ಎಂಬ ಟ್ಯಾಗ್‌ಲೈನ್ ಚಿತ್ರಕ್ಕೆ ನೀಡಲಾಗಿದೆ. ಆದರೂ ಅವರು ಇದನ್ನು ನಿರ್ದೇಶಿಸಲು ಹೋಗಿಲ್ಲ. ಉಪ್ಪಿಯ ಅಡಿಪಾಯವನ್ನು ಬಳಸಿಕೊಂಡು ಸಂಭಾಷಣೆ ಬರೆದು, ನಿರ್ದೇಶಿಸಿರುವುದು ರೇಡಿಯೋ ಜಾಕಿ ಶ್ರೀನಿವಾಸ್. ಚಿತ್ರದಲ್ಲಿ ಉಪ್ಪಿಗೆ 'ಜಾಕಿ' ಭಾವನಾ ಮತ್ತು ಕನ್ನಡತಿ ಮೈತ್ರೇಯಿ ಎಂಬ ಇಬ್ಬರು ನಾಯಕಿಯರು.

ಗುಟ್ಟು ಬಿಟ್ಟು ಕೊಡದವರಲ್ಲಿ ಉಪ್ಪಿ ನಂಬರ್ ವನ್. ಆದರೂ ಕಥೆಯೇನು ಎಂಬ ಪ್ರಶ್ನೆಗಳು ತೂರಿ ಬಂದವು. ಆ ಪ್ರಶ್ನೆಗಳಿಗೆ ಉಪ್ಪಿ ಅಷ್ಟೇ ಜಾಣತನದಿಂದ ಉತ್ತರ ಕೊಟ್ಟು ನುಣುಚಿಕೊಂಡರು. ಆದರೆ ಎರಡನೇ ನಾಯಕಿ ಮೈತ್ರೇಯಿ ಕೆಲವು ಸುಳಿವುಗಳನ್ನು ಬಿಟ್ಟುಕೊಟ್ಟರು. ತಾನು ಮತ್ತು ಉಪ್ಪಿ ಜುವೆಲ್ಲರಿ ಅಂಗಡಿಗೆ ಕನ್ನ ಹಾಕುತ್ತೇವೆ ಅನ್ನೋದು ಅವರಿಂದ ಹೊರ ಬಿತ್ತು. ಉಪ್ಪಿಯಂತಹ ಸ್ಟಾರ್ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದೇ ಗ್ರೇಟ್. ನಟನೆಯಲ್ಲೂ ಅವರಿಂದ ಸಾಕಷ್ಟು ಪಾಠ ಕಲಿತಿದ್ದೇನೆ ಎಂದರು.

ಕಥೆಗೆ ಶ್ರೀನಿವಾಸ್ ತುಂಬಾ ಸಹಕಾರ ನೀಡಿದ್ದರು. ಒಂದು ರೀತಿಯಲ್ಲಿ ನನ್ನ ಬೆನ್ನ ಹಿಂದೆ ಬೇತಾಳದಂತಿದ್ದರು. ತುಂಬಾ ಚೆನ್ನಾಗಿ ನಿರ್ದೇಶಿಸಿದ್ದಾರೆ. ಚಿತ್ರೀಕರಣ ಬಹುತೇಕ ಮುಗಿದಿದೆ. ಇನ್ನುಳಿದಿರುವುದು ಒಂದು ಹಾಡು ಮಾತ್ರ. ಅಷ್ಟಾದರೆ ಮತ್ತೆ ಬಿಡುಗಡೆಯದ್ದೇ ಜಪ ಎಂದರು ರಿಯಲ್ ಸ್ಟಾರ್ ಉಪೇಂದ್ರ.

ಚಿತ್ರಕ್ಕೆ ಇಬ್ಬರು ನಿರ್ಮಾಪಕರು. ಏಳೆಂಟು ವರ್ಷಗಳ ಹಿಂದೆ ಉಪ್ಪಿಯ 'ಓಂಕಾರ' ನಿರ್ಮಿಸಿದ್ದ ಕನಕಪುರ ಶ್ರೀನಿವಾಸ್ ಮತ್ತು 'ಶಿವ' ಖ್ಯಾತಿಯ ಕೆ.ಪಿ. ಶ್ರೀಕಾಂತ್. ಇಬ್ಬರೂ ಉಪ್ಪಿಯನ್ನು ಅಪಾದಮಸ್ತಕ ಹೊಗಳಿದರು. ಉಪ್ಪಿ ಮೇಲೆ ಸಾಕಷ್ಟು ಭರವಸೆಯಿದೆ ಎಂದು ಶ್ರೀನಿವಾಸ್ ಹೇಳಿದರೆ, ಶಿವರಾಜ್ ಕುಮಾರ್ ನಂತರ ನನಗೆ ಉಪ್ಪಿಯೇ ಫೇವರಿಟ್ ಎಂದರು ಶ್ರೀಕಾಂತ್.

ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ಶ್ರೀಶ ಕೂದವಳ್ಳಿ ಕ್ಯಾಮರಾ ಹಿಡಿದಿದ್ದಾರೆ. ರಂಗಾಯಣ ರಘು, ರಾಜು ತಾಳಿಕೋಟೆ, ರಾಕ್‌ಲೈನ್ ಸುಧಾಕರ್, ಮುಕ್ತಿ ಮೋಹನ್ ಮುಂತಾದವರು ಕೂಡ ನಟಿಸಿದ್ದಾರೆ. ಈಗಿನ ಲೆಕ್ಕಾಚಾರಗಳ ಪ್ರಕಾರ, ಚಿತ್ರ ಜನವರಿ 25ಕ್ಕೆ ರಾಜ್ಯದಾದ್ಯಂತ ಬಿಡುಗಡೆ.


Saturday 15 December, 2012

ಸುವರ್ಣ ವಾಹಿನಿಯಲ್ಲಿ ಉಪೇಂದ್ರ ವಯಸ್ಕರ ಚಿತ್ರ


ಇದು ರೀಲ್ ನಲ್ಲಿ ರಿಯಲ್ ದಂಪತಿಗಳ ಜುಗಲ್ ಬಂದಿ. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅವರ ಶ್ರೀಮತಿ ಪ್ರಿಯಾಂಕಾ ಒಟ್ಟಿಗೆ ಅಭಿನಯದ ಶ್ರೀಮತಿ ಚಿತ್ರ ಇದೇ ಭಾನುವಾರ (ಡಿ.16) ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಸಂಜೆ 6ಕ್ಕೆ ಶ್ರೀಮತಿ ಚಿತ್ರವನ್ನು ವೀಕ್ಷಿಸಬಹುದು.

ಸುದೀಪ್ ನಾಯಕತ್ವದಲ್ಲಿ 'ಕೆಂಪೇಗೌಡ' ಚಿತ್ರವನ್ನು ನಿರ್ಮಿಸಿದ್ದ ಶಂಕರ್ ಗೌಡ ಈ ಚಿತ್ರದ ನಿರ್ಮಾಪಕರು. ಹಿಂದಿಯಲ್ಲಿ ಯಶಸ್ವಿಯಾಗಿದ್ದ 'ಐತ್ ರಾಜ್ ಚಿತ್ರವನ್ನು 'ಶ್ರೀಮತಿ'ಯಾಗಿ ಕನ್ನಡಕ್ಕೆ ರೀಮೇಕ್ ಆಗಿದೆ

ಚಿತ್ರದ ಪಾತ್ರವರ್ಗದಲ್ಲಿ ಪ್ರಿಯಾಂಕಾ, ಸೆಲಿನಾ ಜೇಟ್ಲಿ, ಪ್ರೇಮ್ ಚೋಪ್ರಾ, ಕೋಟ, ಸಯ್ಯಾಜಿ ಶಿಂಧೆ ಮುಂತಾದವರಿದ್ದಾರೆ. ಈ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ 'ಎ' ಸರ್ಟಿಫಿಕೇಟ್ ನೀಡಿದೆ. ಅಂದರೆ ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ. ಚಿತ್ರದಲ್ಲಿ ಪಡ್ಡೆಗಳ ಮೈ ಬೆಚ್ಚಗೆ ಮಾಡುವ ಕೆಲವು ಸನ್ನಿವೇಶಗಳು ಇರುವುದೇ 'ಎ' ಸರ್ಟಿಫಿಕೇಟ್ ಗೆ ಕಾರಣ. ಪ್ರಿಯಾಂಕಾ ಅವರನ್ನು ಉಪೇಂದ್ರ ಕೈಹಿಡಿದ ಬಳಿಕ ಇಬ್ಬರೂ ಜೊತೆಯಾಗಿ ಅಭಿನಯಿಸಿದ ಮೊದಲ ಚಿತ್ರವಿದು. ಇದಕ್ಕೂ ಮುನ್ನ ಎಚ್ ಟುಓ ಚಿತ್ರದಲ್ಲಿ ಅಭಿನಯಿಸಿದ್ದರಾದರೂ ಆಗಿನ್ನೂ ಪ್ರಿಯಾಂಕಾ ಅವರ ಕೈಹಿಡಿದಿರಲಿಲ್ಲ ಉಪ್ಪಿ. ಜಾನಿಲಾಲ್ ಛಾಯಾಗ್ರಹಣ, ಚಿನ್ನಿಪ್ರಕಾಶ್ ನೃತ್ಯನಿರ್ದೇಶನ, ರಾಜೇಶ್ ರಾಮನಾಥ್ ಸಂಗೀತ ಚಿತ್ರಕ್ಕಿದೆ. ಎಂ ರವಿ ಆಕ್ಷನ್ ಕಟ್ ಹೇಳಿರುವ ಚಿತ್ರ. ಚಿತ್ರದಲ್ಲಿ ಪ್ರಿಯಾಂಕಾ ಹಾಗೂ ಉಪೇಂದ್ರ ಅವರು ಅದ್ಭುತವಾಗಿ ಅಭಿನಯಿಸಿದ್ದಾರೆ. ಈ ಭಾನುವಾರ ಡೋಂಟ್ ಮಿಸ್ 'ಶ್ರೀಮತಿ'. 


Tuesday 25 September, 2012

ಉಪೇಂದ್ರ ಅಭಿನಯದ ಕಲ್ಪನಾ ಈ ವಾರ ವಸ್ತುಂದಿ!


ಮೈಮೇಲೆ ಪ್ರೇತ ಬಂದವರಂತೆ ನಟಿಸೋದೇ ರಿಯಲ್ ಸ್ಟಾರ್ ಉಪೇಂದ್ರ ಸ್ಟೈಲ್. ಆದರೆ ಯಾವತ್ತೂ ಪ್ರೇತ ಹಿಡಿದವರ ಪಾತ್ರದಲ್ಲಿ ಕಾಣಿಸಿಕೊಂಡವರಲ್ಲ. ಅಂತಹ ಪಾತ್ರದಲ್ಲಿ ಮೊತ್ತ ಮೊದಲ ಬಾರಿ ಕಾಣಿಸಿಕೊಂಡಿರುವ ಚಿತ್ರವೇ 'ಕಲ್ಪನಾ'. ಅದರಲ್ಲಿ ಉಪ್ಪಿಯದ್ದು ವಿಶಿಷ್ಟ ಪಾತ್ರ.

ಉಪ್ಪಿ ಪಾತ್ರವನ್ನು ಶ್ರುತಿ ಬಣ್ಣಿಸಿರೋದು 'ಗಂಡು ಕಲ್ಪನಾ'. ಮೂಲ ಚಿತ್ರದ ಕಾಮಾಕ್ಷಿ ಪಾತ್ರವನ್ನು ಮಾಡಿರುವ ಶ್ರುತಿ ಹೀಗೆ ಹೇಳಲು ಎರಡು ಕಾರಣಗಳಿವೆ. ಮೊದಲನೆಯದ್ದು, ನಟಿ ಕಲ್ಪನಾ ಜತೆ ಅವರಿಗೆ ನಟಿಸಲು ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ 'ಕಲ್ಪನಾ' ಹೆಸರಿನ ಚಿತ್ರದಲ್ಲಿ ಅಭಿನಯಿಸಿ ಆ ಬಯಕೆಯನ್ನು ಅಷ್ಟೋ ಇಷ್ಟೋ ತೀರಿಸಿಕೊಂಡಿದ್ದಾರೆ. ಎರಡನೇಯದ್ದು ಶ್ರುತಿ 'ಗಂಡು ಕಲ್ಪನಾ' ಎಂದಿರುವುದು ಉಪ್ಪಿ ಪಾತ್ರಕ್ಕೆ.

ಶ್ರುತಿ ಪ್ರಕಾರ, ಇದು ಪೂರ್ತಿಯೆಂದರೆ ಪೂರ್ತಿ ಉಪೇಂದ್ರ ಚಿತ್ರ. ಸುಮಾರು 200 ಚಿತ್ರಗಳಲ್ಲಿ ನಟಿಸಿದ ನಂತರ ಉಪೇಂದ್ರ ಕೂಲ್ ಆಗಬಹುದು, ಅದುವರೆಗೆ ಈ ಅಬ್ಬರ ಇದ್ದೇ ಇರುತ್ತದೆ ಎಂದೂ ಕಿಚಾಯಿಸಿದರು. ಆದರೆ ಉಪ್ಪಿ ಹೇಳೋದೇ ಬೇರೆ. ಚಿತ್ರ ನೋಡಿದ ನಂತರ ಪ್ರೇಕ್ಷಕರ ಮನಸ್ಸಿನಲ್ಲಿ ಶ್ರುತಿ ಮತ್ತು ಉಮಾಶ್ರೀಯವರ ಪಾತ್ರಗಳು ಮಾತ್ರ ಅಚ್ಚಳಿಯದೆ ಉಳಿಯಬಹುದು ಅನ್ನೋದು ಅವರ ಪ್ರಾಮಾಣಿಕ ಅಭಿಪ್ರಾಯ.

ಉಪ್ಪಿ ಇದುವರೆಗೆ ನಟಿಸಿದ ಚಿತ್ರಗಳಲ್ಲಿ 'ಕಲ್ಪನಾ' ಬೇರೆಯೇ ಆಗಿ ನಿಲ್ಲುವ ಚಿತ್ರ. ತಮಿಳಿನ 'ಕಾಂಚನಾ'ದಲ್ಲಿ ರಾಘವ ಲಾರೆನ್ಸ್ ಬೆಚ್ಚಿ ಬೀಳಿಸಿದ್ದ ಪಾತ್ರವನ್ನೇ ಕನ್ನಡದಲ್ಲಿ ರಿಯಲ್ ಸ್ಟಾರ್ ಮಾಡಿದ್ದಾರೆ. ಅಲ್ಲಿ ಸ್ವತಃ ರಾಘವ ಲಾರೆನ್ಸ್ ನಿರ್ದೇಶನವಿತ್ತು, ಆದರೆ ಇಲ್ಲಿ ಹಿರಿಯ ನಿರ್ದೇಶಕ ರಾಮ್ ನಾರಾಯಣ್ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ಮಾಣವೂ ಅವರದ್ದೇ.

ಮಂಗಳಮುಖಿಯಾಗಿ ಶರತ್ ಕುಮಾರ್ ಮಾಡಿದ್ದ ಪಾತ್ರ ಕನ್ನಡದಲ್ಲಿ ಸಾಯಿಕುಮಾರ್ ಪಾಲಾಗಿದೆ. ಕೆಲವು ದೃಶ್ಯಗಳಲ್ಲಿ ಸಾಯಿಕುಮಾರ್ ಯಾರು, ಉಪೇಂದ್ರ ಯಾರು ಎಂಬುದು ಗೊತ್ತಾಗದ ರೀತಿಯಲ್ಲಿ ದೃಶ್ಯಗಳು ಮೂಡಿ ಬಂದಿವೆ. ಮಂಗಳಮುಖಿ ಕಲ್ಪನಾ (ಸಾಯಿಕುಮಾರ್) ಸಾವಿನ ನಂತರ ಆಕೆಯ ಪ್ರೇತ ಉಪೇಂದ್ರನ ದೇಹ ಸೇರಿಕೊಳ್ಳುತ್ತದೆ. ಹಾಗಾಗಿ ಕಲ್ಪನಾ ರೀತಿಯಲ್ಲೇ ಉಪೇಂದ್ರ ವರ್ತಿಸುತ್ತಾರೆ. ಕೆಂಪು ಸೀರೆ ಉಟ್ಟುಕೊಂಡ ಇಬ್ಬರದ್ದೂ ಅಬ್ಬರದ ನೃತ್ಯ. ಅವರಿಗೆ ಹೆದರುವ ಪಾತ್ರಗಳಲ್ಲಿ ಶ್ರುತಿ ಮತ್ತು ಉಮಾಶ್ರೀ ಕಾಣಿಸಿಕೊಂಡಿದ್ದಾರೆ.

'ಕಾಂಚನಾ'ದಲ್ಲಿ ನಾಯಕಿಯಾಗಿದ್ದ ಲಕ್ಷ್ಮಿ ರೈ ಅವರೇ ಇಲ್ಲೂ ಇದ್ದಾರೆ. ಉಪ್ಪಿಗೆ ನಾಯಕಿಯಾಗಿರುವುದಕ್ಕಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಕನ್ನಡದಲ್ಲಿ ಇದು ಅವರಿಗೆ ನಾಲ್ಕನೇ ಚಿತ್ರ.

ಇತ್ತೀಚೆಗಷ್ಟೇ 'ಕಲ್ಪನಾ' ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಮೂಲ ಚಿತ್ರದ ಒಂದೆರಡು ಹಾಡುಗಳನ್ನು ಉಳಿಸಿಕೊಂಡು, ಕೆಲವು ಹೊಸ ಮಟ್ಟುಗಳನ್ನು ಹಾಕಿದವರು ವಿ. ಹರಿಕೃಷ್ಣ. ಇನ್ನು ರಾಮ್ ನಾರಾಯಣ್ ಅವರಿಗೆ ಇದು 125ನೇ ಚಿತ್ರ ಅನ್ನೋದು ವಿಶೇಷ.

ಈ ವಾರ ಕಲ್ಪನಾ coming


ಕಳೆದ ವಾರವಷ್ಟೇ ಹಾರರ್ ಮತ್ತು ಸಸ್ಪೆನ್ಸ್‍ವುಳ್ಳ ಚಾರುಲತಾ ತೆರೆ ಕಂಡಿತ್ತು. ಪ್ರಿಯಾಮಣಿ ಸಯಾಮಿಯಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಇದೀಗ ಉಪೇಂದ್ರ ಕಲ್ಪನಾ ಆಗಿ ಬರುತ್ತಿದ್ದಾರೆ.
ಇಲ್ಲಿ ಉಪೇಂದ್ರ ದ್ವಿಪಾತ್ರದಲ್ಲಿ ನಟಿಸಿಲ್ಲ. ಎರಡು ಶೇಡ್ ವುಳ್ಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೂ ಮಂಗಳಮುಖಿಯಾಗಿ! ಹೌದು.
ತೆಲುಗು ಹಾಗೂ ತಮಿಳಿನಲ್ಲಿ ತೆರೆ ಕಂಡಿದ್ದ ಕಾಂಚನ ಚಿತ್ರದ ರೀಮೇಕೇ `ಕಲ್ಪನಾ'. ಅಲ್ಲಿ ಲಾರೆನ್ಸ್ ಮಾಡಿದ ಪಾತ್ರವನ್ನು ಇಲ್ಲಿ ಉಪ್ಪಿ ನಿರ್ವಹಿಸಿದ್ದಾರೆ. ಶರತ್ ಪಾತ್ರವನ್ನು ಸಾಯಿಕುಮಾರ್ ಮಾಡಿದ್ದಾರೆ.
ದ್ವಿತೀಯಾರ್ಧದ ನಂತರ ಮಂಗಳಮುಖಿ ಪಾತ್ರ ಉಪ್ಪಿಯನ್ನು ಆವರಿಸಿಕೊಳ್ಳುತ್ತದೆ. ಮುಂದೆ...? ಥಿಯೇಟರ್‍ನಲ್ಲಿ ನೋಡಿದ್ರೇನೆ ಮಜಾ ಎನ್ನುತ್ತಾರೆ ಉಪ್ಪಿ. ಇನ್ನು ಉಪ್ಪಿ ಜೊತೆ ಕನ್ನಡದ ಹುಡುಗಿ ಲಕ್ಷ್ಮಿ ರೈ ಹೆಜ್ಜೆ ಹಾಕಿದ್ದಾರೆ.
ಉಮಾಶ್ರೀ ಮತ್ತು ಶೃತಿ ಕೂಡ ಚತ್ರದಲ್ಲಿದ್ದಾರೆ. ಕಳೆದ ವಾರ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಉಪ್ಪಿ ಕೂಡ ಚಿತ್ರದ ಮೇಲೆ ಇನ್ನಿಲ್ಲದ ಭರವಸೆ ಇರಿಸಿಕೊಂಡಿದ್ದಾರೆ.
ಖ್ಯಾತ ನಿರ್ದೇಶಕ ರಾಮನಾರಾಯಣ್ ಅವರ 125ನೇ ಚಿತ್ರದಲ್ಲಿ ಕಾಣಿಸಿಕೊಂಡಿರೋದು ನನ್ನ ಭಾಗ್ಯ. ಹಾರರ್ ಚಿತ್ರದಲ್ಲಿ ಕಾಮಿಡಿ ಇಡೋದು ಕಷ್ಟ. ಆದರೆ `ಕಲ್ಪನ'ದಲ್ಲಿ ಎರಡೂ ಮಿಳಿತವಾಗಿದೆ ಎನ್ನುತ್ತಾರೆ ಉಪ್ಪಿ.
ನನಗೆ ಮಿನುಗುತಾರೆ ಕಲ್ಪನ ಜೊತೆ ನಟಿಸಬೇಕೆಂಬ ಆಸೆಯಿತ್ತು. ಆದರೆ ಅದು ಈಡೇರಲಿಲ್ಲ. ಈಗ ಗಂಡು ಕಲ್ಪನ ಜೊತೆ ನಟಿಸಿದ್ದೇನೆ ಎಂದು ಹೇಳಿ ನಗುತ್ತಾರೆ ಶೃತಿ. ಎಲ್ಲರ ಕುತೂಹಲಕ್ಕೆ ಈ ವಾರ ತೆರೆ ಬೀಳಲಿದೆ.


Sunday 23 September, 2012

ದೀಪಿಕಾ ಪಡುಕೋಣೆ ಸಂಪರ್ಕಿಸಿಲ್ಲ ಎಂದ ಉಪೇಂದ್ರ


ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ತಮ್ಮ ಬರಲಿರುವ ಚಿತ್ರಕ್ಕಾಗಿ ದೀಪಿಕಾ ಪಡುಕೋಣೆ ಅವರನ್ನು ಸಂಪರ್ಕಿಸಿದ್ದಾರೆ ಎಂಬ ಸುದ್ದಿ ಗಾಂಧಿನಗರದ ತುಂಬಾ ಓಡಾಡುತ್ತಿತ್ತು. ಆದರೆ ಅದು ಸುಳ್ಳು, ತಾವು ದೀಪಿಕಾರನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿರುವ ಉಪೇಂದ್ರ ಈ ಸುದ್ದಿಗೆ ತೆರೆ ಎಳೆದಿದ್ದಾರೆ. ಅಲ್ಲಿಗೆ, ಕನ್ನಡದ 'ಐಶ್ವರ್ಯಾ' ಚಿತ್ರದ ಮೂಲಕ ಕೆರಿಯರ್ ಆರಂಭಿಸಿ ಈಗ ಬಾಲಿವುಡ್ ಬಹುಬೇಡಿಕೆ ತಾರೆಯಾಗಿರುವ ದೀಪಿಕಾ ಮತ್ತೆ ಕನ್ನಡಕ್ಕೆ ಬರುವ ಸುದ್ದಿಗೆ ತಾತ್ಕಾಲಿಕ ತಡೆ ಬಿದ್ದಂತಾಗಿದೆ.
ತಮ್ಮ ಸೌಂದರ್ಯದ ಮೂಲಕ ಕನ್ನಡ ಪ್ರೇಕ್ಷಕರಿಗೆ ಮೋಡಿ ಮಾಡಿದ್ದ ದೀಪಿಕಾ ಪಡುಕೋಣೆ, ನಂತರ ಬಾಲಿವುಡ್ ಕಡೆ ಮುಖ ಮಾಡಿ ಅಚ್ಚರಿ ಮೂಡಿಸುವಷ್ಟರ ಮಟ್ಟಿಗೆ ಅಲ್ಲಿ ಬೆಳೆದಿದ್ದಾರೆ. ಆದರೂ ತಮ್ಮ ಮೊದಲ ಚಿತ್ರದ ನಾಯಕ ನಟ ಉಪೇಂದ್ರ ಮೇಲೆ ದೀಪಿಕಾ ಗೌರವ ಸ್ವಲ್ಪವೂ ಕಡಿಮೆಯಾಗಿಲ್ಲ ಎನ್ನಲಾಗುತ್ತಿದೆ.
ಸುದ್ದಿಮೂಲಗಳ ಪ್ರಕಾರ, ಉಪೇಂದ್ರ ಹುಟ್ಟುಹಬ್ಬದ ದಿನ (ಸೆಪ್ಟೆಂಬರ್ 18) ಘೋಷಣೆಯಾಗಿರುವ ಉಪೇಂದ್ರ ನಿರ್ದೇಶನದ ಹೊಸ ಚಿತ್ರ 'ಉಪೇಂದ್ರ- 2' ನಾಯಕಿಯಾಗಿ ದೀಪಿಕಾ ಪಡುಕೋಣೆ ಆಯ್ಕೆ ನಡೆದಿದೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಸ್ವತಃ ಉಪ್ಪಿ "ದೀಪಿಕಾ ಸಂಪರ್ಕಿಸುವ ಕುರಿತು ಯಾವುದೇ ಪ್ರಯತ್ನವೂ ನನ್ನಿಂದ ನಡೆದಿಲ್ಲ. ಅಷ್ಟಕ್ಕೂ, ಇನ್ನೂ ನನ್ನ ಹೊಸ ಚಿತ್ರದ ಕೆಲಸ ಪೂರ್ಣಗೊಂಡಿಲ್ಲ. ಯಾವುದೇ ಕಲಾವಿದರ ಆಯ್ಕೆ ನಡೆದಿಲ್ಲ. ಆದರೆ ಹೊಸಬರು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಬರುತ್ತಾರೆ ಎಂದು ಈಗಲೇ ಹೇಳಬಲ್ಲೆ" ಎಂದಿದ್ದಾರೆ ಉಪೇಂದ್ರ.
ಹೊಸ ಚಿತ್ರಕ್ಕೆ ಉಪೇಂದ್ರ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಈ ಚಿತ್ರಕ್ಕೆ ಸಂಗೀತ ಗುರುಕಿರಣ್ ಅವರದು. ಛಾಯಾಗ್ರಾಹಕರಾಗಿ ವೇಣು ಆಯ್ಕೆ ನಡೆದಿದೆ ಎಂಬ ಸಮಾಚಾರ ಬಿಟ್ಟರೆ ಮಿಕ್ಕಿದ್ದು ಸದ್ಯಕ್ಕೆ ಸಸ್ಪೆನ್ಸ್! ಚಿತ್ರದ ಶಿರ್ಷಿಕೆ ಬಗ್ಗೆ 'ಸೂಪರ್ ಚಿತ್ರದಂತೆ 'ಹುಳ' ಬಿಟ್ಟಿದ್ದಾರೆ ನಿರ್ದೇಶಕರು. ಉಪ್ಪಿ ಈಗ ಬಿಜಿಯಾಗಿರುವುದರಿಂದ ಮುಂದಿನ ತಿಂಗಳು ಈ ಚಿತ್ರ ಸೆಟ್ಟೇರುವ ಸಾಧ್ಯತೆಯಿದೆ.